Sunday, September 6, 2009

ಪ್ರಸಂಗದ ಸುತ್ತ: ಶ್ವೇತಕುಮಾರ ಚರಿತ್ರೆ

ಶ್ವೇತಕುಮಾರ ಚರಿತ್ರೆ ಅಥವಾ ಶಿವಪಂಚಾಕ್ಷರೀ ಮಹಾತ್ಮೆ ಯಕ್ಷಗಾನ ಪ್ರಸಂಗಗಳಲ್ಲಿ ವಿಶಿಷ್ಟವಾದುದು. ಶಿವನ ಪಂಚಾಕ್ಷರೀ ಬೀಜಮಂತ್ರದ ಮಹಿಮೆಯನ್ನು ಈ ಪ್ರಸಂಗ ಸಾರುತ್ತದೆ.
ಶ್ವೇತಕುಮಾರನೆಂಬ ರಾಜ ತನ್ನ ರಾಜ್ಯವನ್ನು ಸುಭಿಕ್ಷವಾಗಿ ಆಳುತ್ತಿದ್ದ. ಒಮ್ಮೆ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದಾಗ ಋಷಿ ಕನ್ಯೆಯೊಬ್ಬಳನ್ನು ಕಂಡು ಮೋಹಗೊಂಡು ಆಕೆಯನ್ನು ವರಿಸುತ್ತಾನೆ.
ಆದರೆ, ಮತ್ತೊಮ್ಮೆ ಕಾಡೊಳಗೆ ಸುತ್ತಾಡುತ್ತಿದ್ದಾಗ ಯಕ್ಷ ಸ್ತ್ರೀಯೊಬ್ಬಳಿಂದ ಮೋಹಗೊಂಡು ಮಾಡಬಾರದ ಅಪರಾಧಗಳನ್ನು ಮಾಡುತ್ತಾನೆ.
ಹೀಗಿರಲೊಮ್ಮೆ ಆ ರಾಜ್ಯಕ್ಕೆ ಅಸುರನೊಬ್ಬನ ಪ್ರವೇಶವಾಗುತ್ತದೆ. ಆತ ಸಿಕ್ಕಸಿಕ್ಕವರನ್ನೆಲ್ಲ ವಧಿಸುತ್ತಾ ಶ್ವೇತಕುಮಾರನನ್ನೂ ಯುದ್ಧಕ್ಕೆ ಆಹ್ವಾನಿಸುತ್ತಾನೆ. ಯುದ್ಧದಲ್ಲಿ ಶ್ವೇತಕುಮಾರ ಮಡಿಯುತ್ತಾನೆ. ಅಸುರ ಶ್ವೇತಕುಮಾರನ ಪತ್ನಿಯನ್ನು ಕದ್ದೊಯ್ದು ಸೆರೆಯಲ್ಲಿಡುತ್ತಾನೆ.
ಶ್ವೇತಕುಮಾರನ ಆತ್ಮ ನೇರವಾಗಿ ಯಮಲೋಕ ಸೇರುತ್ತದೆ. ಆತ ಮಾಡಿದ ಪುಣ್ಯ-ಪಾಪಗಳ ಲೆಕ್ಕವಾಗಿ ಆತನಿಗೆ 1 ವರ ಮತ್ತು ನರಕದಲ್ಲಿ ಶಿಕ್ಷೆ ನೀಡುವುದೆಂದು ನಿರ್ಧಾರವಾಗುತ್ತದೆ. 2ರಲ್ಲಿ ಒಂದನ್ನು ಮೊದಲು ಆರಿಸಿಕೊಳ್ಳಲು ಯಮಧರ್ಮ ಶ್ವೇತಕುಮಾರನಿಗೆ ಅವಕಾಶ ನೀಡಿದಾಗ ಆತ, ತನಗೆ ೊ ರಾತ್ರಿ ರಂಭೆಯ ಜೊತೆ ಕಳೆಯಬೇಕೆಂಬ ಬೇಡಿಕೆ ಮುಂದಿಡುತ್ತಾನೆ.
ಯಮದೂತರು ಆತನನ್ನು ರಂಭೆಯ ಅಂತಃಪುರಕ್ಕೆ ಬಿಡುತ್ತಾರೆ. ರಂಭೆಗೋ ಈತನನ್ನು ಕಂಡು ಒಂದೆಡು ಮರುಕ ಮತ್ತೊಂದೆಡೆ ಸಿಟ್ಟು. ತಾನು ಹೇಳಿದಂತೆ ಕೇಳಿದರೆ ಮಾತ್ರ ಆತನಿಗೆ ದೇಹಸುಖ ನೀಡುವುದಾಗಿ ರಂಭೆ ಷರತ್ತು ವಿಧಿಸುತ್ತಾಳೆ.
ಷರತ್ತು ಇಷ್ಟೆ "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ರಂಭೆ ಸೂಚನೆ ಕೊಡುವವರೆಗೂ ಹೇಳುತ್ತಲೇ ಇರಬೇಕು. ಕೆಲವೇ ಕ್ಷಣಗಳಲ್ಲಿ ಶ್ವೇತಕುಮಾರ ಪಂಚಾಕ್ಷರೀ ಮಂತ್ರದಲ್ಲಿ ತಲ್ಲೀನನಾಗುತ್ತಾನೆ. ಬೆಳಗ್ಗೆ ಯಮದೂತರು ಬರುವವರೆಗೂ.
ಯಮದೂತರು ಶ್ವೇತಕುಮಾರನನ್ನು ಎಳೆದೊಯ್ಯಲು ಶಿವಗಣಗಳು ಬಂದು ಅವರನ್ನು ತಡೆಯುತ್ತಾರೆ. ಯಾವನೇ ವ್ಯಕ್ತಿ ಎಂಥ ಪಾಪ ಮಾಡಿದ್ದರೂ ಆತ ಶಿವಧ್ಯಾನ ಮಾಡಿದಲ್ಲಿ ಪಾಪದಿಂದ ವಿಮೋಚನೆ ಪಡೆಯುತ್ತಾನೆ. ಹೀಗಾಗಿ ಶ್ವೇತಕುಮಾರ ಶಿವಲೋಕಕ್ಕೆ ಬರುವುದೇ ಸರಿ ಎಂದು ಶಿವನ ಬಳಿ ಕರೆದೊಯ್ಯುತ್ತಾರೆ.
ಶಿವ ಶ್ವೇತಕುಮಾರನಿಗೆ ಮತ್ತೆ ಭೂಮಿಯಲ್ಲಿ ಜನಿಸುವಂತೆ ಅನುಗ್ರಹಿಸಿ "ನಿನ್ನನ್ನು ವಧಿಸಿದ ರಾಕ್ಷಸ ಒಮ್ಮೆ ಸತ್ತು ಬದುಕಿದವರಿಂದಲೇ ಸಾವು ಬರುವಂಥ ವರ ಪಡೆದಿದ್ದ. ಮತ್ತೆ ಭೂಮಿಯಲ್ಲಿ ಜನ್ಮ ತಳೆದು ಆ ಅಸುರನನ್ನು ವಧಿಸು" ಎಂದು ಶಿವ ಹರಸುತ್ತಾನೆ.
ಮತ್ತೆ ಭೂಮಿಗೆ ಬರುವ ಶ್ವೇತಕುಮಾರ ಅಸುರನನ್ನು ವಧಿಸಿ ತನ್ನ ರಾಜ್ಯವನ್ನು ಮತ್ತೆ ಸಂಪಾದಿಸಿಕೊಳ್ಳುತ್ತಾನೆ.
ಲೇಖನ: ಸಂಗೀತಾ ಪುತ್ತೂರು