Sunday, April 19, 2009

ಪ್ರಸಂಗದ ಸುತ್ತ...: ದೇವಿ ಮಹಾತ್ಮೆ


ಕ್ಷಗಾನದಲ್ಲಿ ಅತ್ಯಂತ ಪ್ರಮುಖ ಪ್ರಸಂಗ- ದೇವಿ ಮಹಾತ್ಮೆ. ಸೃಷ್ಟಿಯ ಆದಿಯಿಂದಲೇ ಈ ಪ್ರಸಂಗ
ಆರಂಭಗೊಳ್ಳುತ್ತದೆ. ದೇವಿ ಮಹಾತ್ಮೆಯಲ್ಲಿ ಜಗತ್ತಿನ ಸೃಷ್ಟಿ, ನಂತರದಲ್ಲಿ ಜಗದ ಉದ್ಧಾರಕ್ಕಾಗಿ
ಜಗಜ್ಜನನಿಯ ಅವತಾರಗಳು ಮತ್ತು ರೂಪಾಂತರಗಳ ಚಿತ್ರಣವಿದೆ.
ಎತ್ತ ನೋಡಿದರೂ ಮಹಾನ್ ಸಾಗರ. ಭೂಮಿಯ ಸುಳಿವೇ ಇಲ್ಲ. ಇಂತಹ ಘೋರ ಶರದಿಯ
ಮಧ್ಯದಲ್ಲಿ ತ್ರಿಮೂತಿಗಳ ಜನನವಾಗುತ್ತದೆ. ತಮ್ಮ ಜನನಕ್ಕೆ ಕಾರಣಕರ್ತರಾರೆಂದು ಇವರು
ಚಿಂತಿಸುತ್ತಿರಬೇಕಾದರೆ ಜಗನ್ಮಾತೆ ಪ್ರಕಟಗೊಂಡು ಜನ್ಮ ರಹಸ್ಯವನ್ನು ತಿಳಿಸಿ ಅವರಿಗೆ ಬ್ರಹ್ಮ, ವಿಷ್ಣು,
ಮಹೇಶ್ವ್ಟರರೆಂದು ನಾಮಕರಣ ಮಾಡುತ್ತಾಳೆ.
(ತೀರಾ ಇತ್ತೀಚಿನ ನಾಗರಿಕ ಯುಗದಲ್ಲಿ ಜೀವ ಸೃಷ್ಟಿ ನೀರಿನಲ್ಲೇ ಆರಂಭವಾಯಿತು ಎಂದು
ವಿಜ್ಞಾನಿಗಳು ನಿರೂಪಿಸಿದ್ದಾರೆ. ಆದರೆ, ಭಾರತದ ಪ್ರತಿಯೊಂದು ಶಾಸ್ತ್ರವೂ, ಪುರಾಣಗಳೂ, ವೇದ,
ಉಪನಿಷತ್ ಗಳೂ ಬಹಳ ಹಿಂದೆಯೇ ಈ ವಿಚಾರವನ್ನು ಹೇಳಿವೆ ಎಂಬುದಕ್ಕೆ ಇದು ಸಾಕ್ಷಿ.)
ನಂತರ ಅವರಿಗೆ ಅವರದ್ದೇ ಆದ ಜವಾಬ್ದಾರಿಗಳನ್ನೂ ನೀಡುತ್ತಾಳೆ. ಬ್ರಹ್ಮ, ರಾಜಸ್ವ ಗುಣದಿಂದ ಕೂಡಿದ
ಕಾರಣ ಸೃಷ್ಟಿ ಕಾರ್ಯವನ್ನೂ, ವಿಷ್ಣುವು ಸೌಮ್ಯ ಸ್ವಭಾವದವನಾದ್ದರಿಂದ ಪಾಲನಾ ಕಾರ್ಯವನ್ನೂ
(ಸ್ಥಿತಿ), ಈಶ್ವರನು ಉಗ್ರ ಸ್ವರೂಪಿಯಾದ್ದರಿಂದ ಆತನಿಗೆ ಲಯಕರ್ತನ ಜವಾಬ್ದಾರಿಯನ್ನೂ ನೀಡುತ್ತಾಳೆ.
ಯಾವುದದಾದರೂ ಸಮಸ್ಯೆಗಳಿದ್ದಲ್ಲಿ ನನ್ನನ್ನೇ ಭಕ್ತಿಯಿಂದ ಸ್ಥುತಿಸಿದರೆ ಅಭಯವನ್ನು ನೀಡುವುದಾಗಿ
ಅನುಗ್ರಹಿಸಿ ಅಂತರ್ದಾನಳಾಗುತ್ತಾಳೆ.
ಇಷ್ಟಾಗುವಾಗ ತ್ರಿಮೂತಿಗಳಲ್ಲಿ ತಮ್ಮಲ್ಲಿ ದೊಡ್ಡವವರಾರೆಂಬ ಪ್ರಶ್ನೆ ಮೂಡುತ್ತದೆ. ಬ್ರಹ್ಮ ತಾನೇ
ದೊಡ್ಡವನೆಂದರೆ ವಿಷ್ಣು ನಾನು ಎನ್ನುತ್ತಾನೆ. ಈಶ್ವರ ಹರಿ-ಹರರಲ್ಲಿ ಭೇದವಿಲ್ಲ ಎಂದು ಹರಿಯಲ್ಲಿ
ಐಕ್ಯಗೊಳ್ಳುತ್ತಾನೆ. ನಂತರ ವಿಷ್ಣುವು ಬ್ರಹ್ಮನ ಬಾಯಿಯ ಮೂಲಕ ಆತನ ಉದರ ಹೊಕ್ಕು
ಪರಿಶೀಲಿಸುತ್ತಾನೆ. ಎತ್ತ ನೋಡಿದರೂ ಚಿನ್ನದ ಗಟ್ಟಿಯೇ ಕಂಡುಬಂದು ಚಕಿತಗೊಳ್ಳುತ್ತಾನೆ. ಆಗಲೇ
ಬ್ರಹ್ಮ, ತನ್ನ ನವದ್ವಾರಗಳ ಪೈಕಿ ಗುದವೊಂದನ್ನು ಬಿಟ್ಟು 8 ದ್ವಾರಗಳನ್ನು ಮುಚ್ಚುತ್ತಾನೆ. ಹರಿ
ವಿಧಿಯಿಲ್ಲದೇ ಗುದದ್ವಾರದ ಮೂಲಕವೇ ಹೊರ ಬರುವ ಕಾರಣ ಆತನಿಗೆ ಅಧೋಕ್ಷಜ ಎಂಬ ಹೆಸರು
ಅನ್ವರ್ಥವಾಗುತ್ತದೆ. ಬ್ರಹ್ಮನ ಗಭದಲ್ಲಿ ಹಿರಣ್ಯವೇ(ಚಿನ್ನ) ತುಂಬಿರುವುದರಿಂದ ಆತ
ಹಿರಣ್ಯಗರ್ಭನಾಗುತ್ತಾನೆ.
ನಂತರದ ಸರದಿ ಬ್ರಹ್ಮನದ್ದು. ಬ್ರಹ್ಮ ವಿಷ್ಣುವಿನ ಬಾಯಿಯ ಮೂಲಕ ಉದರ ಹೊಕ್ಕು ನೋಡಿದರೆ
ಆತನಿಗೆ ಬ್ರಹ್ಮಾಂಡವೇ ಕಾಣುತ್ತದೆ. ದ್ವಾದಶ (12) ಬ್ರಹ್ಮರೂ ಕಾಣುತ್ತಾರೆ. (ಒಂದೊಂದು ಯುಗದ
ನಂತರವೂ ಮತ್ತೊಂದು ಯುಗ ಆರಂಭವಾಗುತ್ತದೆ ಎಂಬುದಕ್ಕೆ ಪುರಾಣದಲ್ಲಿನ ಪುರಾವೆಯಿದು.)
ಒಂದೆಡೆ ಈಶ್ವರನೂ ಕಾಣುತ್ತಾನೆ.
ಬ್ರಹ್ಮ 8 ದ್ವಾರ ಮುಚ್ಚಿದ್ದ. ವಿಷ್ಣು ನವದ್ವಾರಗಳನ್ನೆಲ್ಲ ಮುಚ್ಚಿ ನಿದ್ರೆ ಹೋಗುತ್ತಾನೆ. ಈಗಲೇ
ಮಧು-ಕೈಟಭರ ಜನನವಾಗುವುದು. ವಿಷ್ಣು ತನ್ನ ಕಿವಿಯಿಂದ ತೆಗೆದೆಸೆದ ಕಶ್ಮಲದಿಂದ (ವ್ಯಾಕ್ಸ್)
ಇವರೀವರ ಜನನವಾಗುತ್ತದೆ. (ನೆನಪಿರಲಿ ಮಧು-ಕೈಟಭರು ರಾಕ್ಷಸರಲ್ಲ.)
ಅದೇ ಹೊತ್ತಿಗೆ, ವಿಷ್ಣುವಿನ ಉದರದೊಳಗಿರುವ ಬ್ರಹ್ಮ, ಹೊರ ಬರಲು ದಾರಿ ಕಾಣದೆ ಪರಿತಪಿಸುತ್ತಾ
ನೆ. ಜಗನ್ಮಾತೆಯ ಸ್ಮರಣೆ ಮಾಡಿದಾಗ, ವಿಷ್ಣುವಿನ ನಾಭಿಯಿಂದ (ಹೊಕ್ಕುಳು) ಹೊರ ಬರಲು
ಸೂಚಿಸುತ್ತಾಳೆ. ಬ್ರಹ್ಮ ಹೊರಬಂದಾಗ, ಹಸಿವಿನಿಂದ ಕಂಗೆಟ್ಟಿದ್ದ ಮಧು-ಕೈಟಭರು ಆತನ ಮೇಲೆ
ಆಕ್ರಮಣ ಮಾಡುತ್ತಾರೆ. ಬ್ರಹ್ಮ "ನಾರಾಯಣ.. ನಿನಗಿಂತ ಹಿರಿಯರಿಲ್ಲ" ಎಂದು ವಿಷ್ಣುವಿನ ಮೊರೆ
ಹೋಗುತ್ತಾನೆ. ನಂತರ ವಿಷ್ಣು ಚಕ್ರಾಯುಧದಿಂದ ಮಧು-ಕೈಟಭರ ವಧೆ ಮಾಡಿ ಭೂಮಿಯನ್ನು
ನಿರ್ಮಿಸುತ್ತಾನೆ. (ಮಧು-ಕೈಟಭರ ಕಥೆ ತ್ರಿಮೂತಿಗಳಲ್ಲಿ ಭೇದವಿಲ್ಲ ಎಂಬುದನ್ನು ಪ್ರಚುರಪಡಿಸುತ್ತದೆ.)
ಇದು ದೇವಿ ಮಹಾತ್ಮೆಯ ಒಂದು ಭಾಗ. ನಂತರ ಭೂಮಿಯ ಮೇಲೆ ಮಹಿಷಾಸುರನ
ಜನನವಾಗುತ್ತದೆ. (ಮಹಿಷಾಸುರ ಜನನಕ್ಕೂ 1 ಕಥೆಯಿದೆ ಅದನ್ನು ಮುಂದಿನ ದಿನಗಳಲ್ಲಿ ಧೀಂಕಿಟ
ಬಳಗ ಪ್ರಕಟಿಸುತ್ತದೆ.) ಮಹಿಷಾಸುರ ಭೂಲೋಕದಲ್ಲಿನವರಿಗೆ ಮಾತ್ರವಲ್ಲದೆ ದೇವಲೋಕದವರಿಗೂ
ಉಪಟಳ ಕೊಡಲು ಮುಂದಾಗುತ್ತಾನೆ. ದೇವೇಂದ್ರ ದೇವಲೋಕವನ್ನು ಕಳೆದುಕೊಂಡು
ಭಿಕಾರಿಯಾಗುತ್ತಾನೆ.
ದಾನವರನ್ನು ಸೋಲಿಸುವ ದಾರಿ ಕಾಣದೆ ದೇವೇಂದ್ರಾದಿ ದೇವತೆಗಳು ಜಗಜ್ಜನನಿ, ಯೋಗಮಾಯೆಯ
ಮೊರೆ ಹೋಗುತ್ತಾರೆ. ಆಕೆ, ಮಹಿಷಾಸುರಮರ್ದಿನಿಯಾಗಿ ಅವತರಿಸಿ ಮಹಿಷಾಸುರನನ್ನು
ಸಂಹರಿಸುತ್ತಾಳೆ. ಇಷ್ಟಾದರೂ ದಾನವರ ಉಪಟಳ ಕಡಿಮೆಯಾಗುತ್ತದೆಯೆ? ಇಲ್ಲ.
ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಕ್ಷಾದಿ ಅಸುರರ ಜನನವಾಗುತ್ತದೆ. ದೇವತೆಗಳಿಗೆ
ಇವರಿಂದ ಉಪಟಳ ಶುರು. ಮತ್ತೆ ಜಗನ್ಮಾತೆಯನ್ನೇ ಸ್ತುತಿಸುತ್ತಾರೆ. ಜಗನ್ಮಾತೆ ಅಸುರರನ್ನು
ಮುಗಿಸುವ ಭರವಸೆ ನೀಡಿ, ವೃಂದಾವನದಲ್ಲಿ ಶಾಂಭವೀ ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ಸಂಗೀತ
ಗಾಯನ ಮಾಡುತ್ತಾ, ಉಯ್ಯಾಲೆಯಾಡುತ್ತಾ ವಿಹರಿಸುತ್ತಾಳೆ. (ಸಂಗೀತದಲ್ಲಿ ಶಾಂಭವೀ ರಾಗ
ಎಂದೇ ಇದೆ.)
ಆಕೆಯ ವಿಚಾರ ತಿಳಿವ ಶುಂಭಾಸುರ ದೇವಿಯನ್ನು ವರಿಸಲು ಮುಂದಾಗುತ್ತಾನೆ. ಯಾರು ಎಷ್ಟು
ಬುದ್ಧಿವಾದ ಹೇಳಿದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ದೂತನ ಮೂಲಕ ದೇವಿಗೆ
ತನ್ನನ್ನು ಮದುವೆಯಾಗುವಂತೆ ಹೇಳಿ ಕಳುಹಿಸುತ್ತಾಳೆ. ದೇವಿ "ಶುಂಭನೇ ಬರಲಿ ಶಂಭುವೇ ಬರಲಿ
ಅಂಜುವುದಿಲ್ಲ" ಎಂದು ಹೇಳಿಕಳುಹಿಸುತ್ತಾಳೆ. ಇಷ್ಟಕ್ಕೇ ಶುಂಭ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ,
ಧೂಮ್ರಾಕ್ಷನನ್ನು ಕಳುಹಿಸುತ್ತಾನೆ. ದೇವಿ ಕಣ್ಣ ನೋಟದಿಂದಲೇ ಧೂಮ್ರಾಕ್ಷನನ್ನು ಸುಟ್ಟುಬಿಡುತ್ತಾಳೆ.
ಕ್ರೋಧಗೊಂಡ ಶುಂಭ ಚಂಡ-ಮುಂಡರನ್ನು ಕಳುಹಿಸುತ್ತಾನೆ. ದೇವಿ ಭದ್ರಕಾಳಿಯಾಗಿ ಚಂಡ-ಮುಂಡರ
ಶಿರವನ್ನು ಚಂಡಾಡುತ್ತಾಳೆ. ನಂತರದ ಸರದಿ ರಕ್ತಬೀಜಾಕ್ಷನದ್ದು. ಈತನ ದೇಹದ ರಕ್ತ ನೆಲಕ್ಕೆ
ಸೋಕಿದರೆ ಕೋಟಿ ಕೋಟಿ ಸಂಖ್ಯೆಯ ರಾಕ್ಷಸರು ಹುಟ್ಟುವ ವರವನ್ನು ಪಡೆದವ ರಕ್ಷಬೀಜಾಕ್ಷ.
ಈತನನ್ನು ರಕ್ತೇಶ್ವರಿಯಾಗಿ ರೂಪಾಂತರಗೊಂಡು ವಧಿಸುತ್ತಾಳೆ ಜಗನ್ಮಾತೆ. ಶುಂಭ-ನಿಶುಂಭರನ್ನು
ಶಾಂಭವಿಯಾಗಿಯೇ ಸಂಹರಿಸುತ್ತಾಳೆ. ಇದು ದೇವಿಯ ಮಹಾತ್ಮೆ. (ದೇವಿ ಮಹಾತ್ಮೆಯ ಎಲ್ಲಾ
ಉಪಪ್ರಸಂಗಗಳ ಬಗೆಗಿನ ಲೇಖನಗಳನ್ನೂ ಧೀಂಕಿಟ ಬಳಗ ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ.)
ಯಕ್ಷಗಾನ ಆಟ: ದೇವಿ ಮಹಾತ್ಮೆಯನ್ನೇ ಹೆಚ್ಚಾಗಿ ಆಡುವ ಮೇಳಗಳೆಂದರೆ- ಕಟೀಲು ಶ್ರೀ
ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಮತ್ತು ಮಾರಣಕಟ್ಟೆ ಯಕ್ಷಗಾನ ಮಂಡಳಿ. ಉಳಿದ
ಮೇಳಗಳೂ ಆಡುತ್ತವೆ. ಆದರೆ, ಈ ಮೇಳಗಳದ್ದು ವಿಶೇಷ. ದೇವಿ ಮಹಾತ್ಮೆ ಆಟ ಆಡಿಸುತ್ತೇನೆಂದು
ಹರಕೆ ಹೊತ್ತರೆ ಇಷ್ಟಾರ್ಥಗಳು, ಮನೋಕಾಮನೆಗಳು ನೆರವೇರುತ್ತವೆ.
ದೇವಿ ಮಹಾತ್ಮೆ ಪ್ರಸಂಗ ರಾತ್ರಿ 8-8.30ರ ಹೊತ್ತಿಗೆ ಆರಂಭವಾದರೆ ಮಂಗಳವಾಗುವುದು
ಬೆಳ್ಳಂಬೆಳಗ್ಗೆ 6 ಗಂಟೆಗೆ. ಇಷ್ಟು ಹೊತ್ತು ಇಲ್ಲದಿದ್ದರೆ ಪ್ರಸಂಗವನ್ನು ಸರಿಯಾಗಿ ಆಡಲಾಗುವುದಿಲ್ಲ.
ವಿಶೇಷ: ದೇವಿ ಮಹಾತ್ಮೆ ಪ್ರಸಂಗದ ವಿಶೇಷಗಳು ಹಲವು. ಉಳಿದ ಯಾವುದೇ ಪ್ರಸಂಗದಲ್ಲಿ
ಇಲ್ಲದಂತಹ ಹಲವಾರು ಅಂಶಗಳನ್ನು ಇದರಲ್ಲಿ ಕಾಣಬಹುದು. ಅವುಗಳನ್ನು ಪಟ್ಟಿ ಮಾಡುತ್ತಾ
ಹೋಗುವುದಾದರೆ-1. ಪದ್ಯ- ಗಣಪತಿ ಸ್ತುತಿಯೊಂದಿಗೆ ಪ್ರಸಂಗದ ಪದ್ಯ ಆರಂಭವಾದರೆ ಮಂಗಳದ ವರೆಗೆ ಒಂದೇ ಒಂದು
ಪದವನ್ನೂ ಬಿಡುವಂತಿಲ್ಲ. ಸಮಯ ಇಲ್ಲ, ಬೇಗ ಮುಗಿಸಬೇಕೆಂಬ ಆತುರದಲ್ಲಿ ಪದ್ಯ ಪೂರ್ತಿ ಮಾಡದೇ
ಇರುವಂತಿಲ್ಲ.
2. ದೇವಿ- ದೇವಿಯ ವೇಷ ಮಾಡುವಾಗ ಸಾಮಾನ್ಯವಾಗಿ ಬಳಸುವ 3 ಬಣ್ಣಗಳ ಜೊತೆಗೆ ಕಪ್ಪು
ಬಣ್ಣವನ್ನು ಹೆಚ್ಚಿಗೆ ಬಳಸುತ್ತಾರೆ. ಇಲ್ಲವಾದರೆ, ವೇಷಧಾರಿ ಶರೀರದಲ್ಲೇ ದೇವಿ ಪ್ರಕಟೊಳ್ಳುತ್ತಾಳೆ. (ಈ
ರೀತಿ ಪ್ರಕಟಗೊಂಡ ಘಟನೆಗಳೂ ಇವೆ. ಅವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.)
3. ವೃತ- ದೇವಿ ವೇಷಧಾರಿ ಆಟದ ದಿನ ಸಂಪೂರ್ಣ ವೃತದಲ್ಲಿರಬೇಕಾಗುತ್ತದೆ. ಮಧು-ಮಾಂಸ
ಸೇವಿಸಬಾರದು. ಒಪ್ಪತ್ತು ಊಟವನ್ನೇ ಮಾಡಬೇಕು. ಅಂದು ಸ್ತ್ರೀಸಂಗವನ್ನೂ ಮಾಡಬಾರದು.
4. ಕುಂಬಳಕಾಯಿ ಒಡೆಯುವುದು- ಒಬ್ಬೊಬ್ಬ ರಾಕ್ಷಸನ ವಧೆಯಾಗುತ್ತಿದ್ದಂತೆ ಒಂದೊಂದು
ಕುಂಬಳಕಾಯಿ ಒಡೆದು ಅದಕ್ಕೆ ಕುಂಕುಮ ಹಚ್ಚಲಾಗುತ್ತದೆ. ಇದು, ದೇವಿಗೆ ಅಸುರರನ್ನು ಬಲಿ
ಕೊಡುವುದರ ಸಂಕೇತ.
5. ಪ್ರತಿಯೊಬ್ಬ ರಾಕ್ಷಸನ ವಧೆಯಾಗುವಾಗಲೂ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ.
ಲೇಖನ- ದಿವ್ಯಶ್ರೀ ಬದಿಯಡ್ಕ